Thursday, 17 March 2022

ಕಾಶ್ಮೀರ ನಮ್ಮ ಸಂಸ್ಕೃತಿಯ ಹೆಗ್ಗುರುತು, ಮಾಸಿ ಹೋಗದಿರಲಿ ಯಾವತ್ತೂ

ಕಾಶ್ಮೀರ ನಮ್ಮ ಸಂಸ್ಕೃತಿಯ ಹೆಗ್ಗುರುತು, ಮಾಸಿ ಹೋಗದಿರಲಿ ಯಾವತ್ತೂ

- ವಿಶ್ವನಾಥ ಸುಂಕಸಾಳ

 ‘ದ ಕಾಶ್ಮೀರ್ ಫೈಲ್ಸ್’ ಮೂಲಕ ಇಡೀ ದೇಶದಲ್ಲಿ ಸಣ್ಣದೊಂದು ಜಾಗೃತಿ ಮೂಡಲಾರಂಭಿಸಿದೆ. ನಮ್ಮದೇ ದೇಶದ ಒಂದು ಭಾಗದಲ್ಲಿ ನಡೆದ ಕ್ರೌರ್ಯ, ರಕ್ತಸಿಕ್ತ ಇತಿಹಾಸಗಳನ್ನೆಲ್ಲ ಹೇಗೆ ವ್ಯವಸ್ಥಿತವಾಗಿ ಮುಚ್ಚಿಟ್ಟು ನಮ್ಮನ್ನು ಕತ್ತಲೆಯಲ್ಲಿಡಲಾಗಿತ್ತು ಎಂದು ಇಡೀ ದೇಶಕ್ಕೀಗ ಅರಿವಾಗುತ್ತಿದೆ. ಈ ದೇಶದ ನೆಲವನ್ನೂ, ಸಂಸ್ಕೃತಿಯನ್ನೂ, ಜನರನ್ನೂ ಹೇಗೆ ಮೂಲಭೂತವಾದವು ಬೇರೆ ಬೇರೆ ಮಾರ್ಗದಲ್ಲಿ ಕ್ರಮೇಣ ಕಬಳಿಸುತ್ತಾ, ಧ್ವಂಸಗೊಳಿಸುತ್ತಾ, ಗುರುತೇ ಇರದಂತೆ ಆಪೋಶನಗೈಯ್ಯುತ್ತಾ ಬರುತ್ತಿದೆ ಎಂಬುದನ್ನು ಗುರುತಿಸಿಕೊಳ್ಳುವುದಕ್ಕೆ ಮತ್ತು ವಿಮರ್ಶಿಸಿಕೊಳ್ಳುವುದಕ್ಕೆ ಕಾಶ್ಮೀರದ ಈ ಘಟನೆಯು ಈಗ ನಿದರ್ಶನವಾಗಿ ಚಲನಚಿತ್ರದ ರೂಪದಲ್ಲಿ ನಮ್ಮೆದುರಿಗೆ ಬಂದು ನಿಂತಿದೆ. ಎಲ್ಲ ತೊಡಕುಗಳ ನಡುವೆಯೂ ಹಾಗೂ ಮಾಧ್ಯಮಗಳ ಪ್ರಚಾರದ ಅಭಾವದಲ್ಲಿಯೂ ಇಡೀ ದೇಶದ ಜನತೆ ಸ್ವಯಂ ಪ್ರೇರಣೆಯೊಂದಿಗೆ ಚಲನಚಿತ್ರ ನೋಡಲು ಧಾವಿಸುತ್ತಿದೆ. ಚಲನಚಿತ್ರದಲ್ಲಿನ ಒಂದೊಂದು ಸಂಭಾಷಣೆಯೂ ಮನಸ್ಸನ್ನು ಕಲಕುವಂತಿದೆ. ಅಲ್ಲಿನ ಎಲ್ಲ ದೃಶ್ಯಗಳನ್ನೂ ವರ್ತಮಾನದ ತಮ್ಮ ಸುತ್ತಮುತ್ತಲಿನ ಸಂದರ್ಭಕ್ಕೆ ಜೋಡಿಸಿಕೊಂಡು ಜನರು ನೋಡುತ್ತಿರುವುದರಿಂದ ಎಲ್ಲರೊಳಗೆ ಒಂದು ರೀತಿಯ ಕಸಿವಿಸಿಯನ್ನು ಹುಟ್ಟುಹಾಕಿದೆ. ಎಷ್ಟೆಂದರೂ ಅವೆಲ್ಲ ಈ ಹಿಂದೆ ನಡೆದ, ಈಗಲೂ ನಡೆಯುತ್ತಿರುವ ಸತ್ಯದ ಒಂದು ಭಾಗವಷ್ಟೆ.

 ಈ ಚಲನಚಿತ್ರದಲ್ಲಿ ‘ಕೃಷ್ಣ ಪಂಡಿತ್’ ಎಂಬ ಪಾತ್ರವು ಈಗಿನ ಕಾಲದ ‘ನಷ್ಟಪ್ರಜ್ಞ’ರಾದ (ಬ್ರೈನ್ ವಾಶ್ಡ್) ಯುವಕರ ಪ್ರತಿನಿಧಿಯಾಗಿ ಮೂಡಿಬಂದಿದೆ. ಸಮಾಜದಲ್ಲಿನ ಒಂದು ವರ್ಗ ಬೌದ್ಧಿಕತೆ, ಪ್ರಗತಿಪರತೆ, ಸೆಕ್ಯುಲರಿಸಮ್ ಮುಂತಾದ ಹೆಸರಿನಲ್ಲಿ ಹೇಗೆ ಭಾರತೀಯ ಸಮಾಜವನ್ನು ನಾಶ ಮಾಡುವ ಸಾಧನಗಳಾಗಿ ಕಾರ್ಯವೆಸಗುತ್ತಾ, ಆ ಕಾರ್ಯಕ್ಕಾಗಿ ಯುವಕರನ್ನು ಹೇಗೆ ಪಥಭ್ರಷ್ಟರನ್ನಾಗಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ನಾವೆಲ್ಲರೂ ಇಲ್ಲಿಯವರೆಗೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡವರಂತೆ ‘ಆ ಒಂದು ವರ್ಗ’ದ ನಾಟಕವನ್ನು ನಂಬಿದವರೇ. ಸತ್ಯವನ್ನೇ ಹೇಳಿದರೂ ‘ಇವನ್ನೆಲ್ಲ ನಂಬಲು ಸಾಧ್ಯವೇ ಇಲ್ಲ, ಸುಳ್ಳೇ ಇರಬಹುದು’ ಎಂದು ನಮ್ಮನ್ನು ನಾವೇ ನಂಬಿಸಿಕೊಂಡು ಬಂದವರೇ ಆಗಿದ್ದೇವೆ. ಈಗಲೂ ಕೆಲವರು ಇವನ್ನೆಲ್ಲ ಕಟ್ಟುಕತೆ ಎಂಬಂತೆಯೇ ನೋಡುತ್ತಾರೆ. ಅದಕ್ಕೆ ಕಾರಣವನ್ನು ಸಿನಿಮಾದಲ್ಲಿನ ಒಂದು ಸಂಭಾಷಣೆಯೇ ಸ್ವತಃ ವಿವರಿಸುತ್ತದೆ; ‘ಕೆಲವಷ್ಟು ಸತ್ಯಗಳು ಅದೆಂಥ ಕಠೋರ ಸತ್ಯವಾಗಿರುತ್ತವೆಂದರೆ, ಅವೆಲ್ಲ ಸುಳ್ಳೇ ಎಂದು ಅನಿಸುವಷ್ಟು!’ ಎಂದು. 

ನಿಜ, ಕೆಲವಷ್ಟು ಸತ್ಯಗಳನ್ನು ನಮ್ಮ ಕಾಲಿನ ಬುಡಕ್ಕೆ ಬಂದಾಗಲೇ ನಾವು ನಂಬುವುದು. ದೂರದಲ್ಲಿ ನಡೆಯುತ್ತಿದ್ದರೂ ನಮ್ಮ ತನಕ ಬಂದಿಲ್ಲವಲ್ಲ ಎಂದುಕೊಂಡು ಸುಮ್ಮನಿದ್ದುಬಿಡುತ್ತೇವೆ. ಅದರ ಪರಿಣಾಮವೇ ಇಂದು ಬಾಂಗ್ಲಾದೇಶ, ಪಾಕಿಸ್ತಾನದಿಂದಾರಂಭಿಸಿ ಕಾಶ್ಮೀರವನ್ನು ಮುಕ್ಕಿ ಇದೀಗ ಪ.ಬಂಗಾಳ, ಕೇರಳದವರೆಗೆ ಈ ಸಮಸ್ಯೆ ಬಂದು ನಿಂತಿದೆ. 

ಕೃಷ್ಣ ಪಂಡಿತ್ ಕೊನೆಯಲ್ಲಿ ಕಾಶ್ಮೀರದ ಬಗೆಗೆ ಮಾಡುವ ಭಾಷಣ ಎಂಥವರ ಗಂಟಲ ಸೆರೆಯನ್ನೂ ಉಬ್ಬುವಂತೆ ಮಾಡುತ್ತದೆ. ಭಾರತದ ಭವ್ಯ ಸಂಸ್ಕೃತಿಗೆ ಕಾಶ್ಮೀರದ ಕೊಡುಗೆಯೇನು ಎಂಬುದರ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಕಾಶ್ಮೀರದ ನೆಲದ ಪಾವಿತ್ರ್ಯ ಮತ್ತು ಮಹತ್ತ್ವದ ಬಗ್ಗೆ ನಮ್ಮಲ್ಲಿ ಅಭಿಮಾನ ಮೂಡುವಂತೆ ಮಾಡುತ್ತದೆ. ಇನ್ನಷ್ಟು ಈ ವಿಷಯದಲ್ಲಿ ತಿಳಿದುಕೊಳ್ಳಬೇಕೆಂಬ ಜಿಜ್ಞಾಸೆಯನ್ನು ಹುಟ್ಟುಹಾಕುತ್ತದೆ. ಕೃಷ್ಣ ಪಂಡಿತನು ಹೇಳಿದ ಕಾಶ್ಮೀರದ ಗತವೈಭವಕ್ಕೆ ಮತ್ತೊಂದಿಷ್ಟು ವಿಷಯವನ್ನು ಸೇರಿಸಬೇಕೆಂಬ ಉದ್ದೇಶದಿಂದ ಈ ಲೇಖನ. 

ಕಾಶ್ಮೀರವು ಯಾವತ್ತೂ ಜ್ಞಾನಪೀಠವೆಂದೇ ಪ್ರಸಿದ್ಧವಾದ ನೆಲ. ಸಾವಿರಾರು ಮಹಾತ್ಮರು ಈ ನೆಲದಲ್ಲಿ ಹುಟ್ಟಿ ಭಾರತವರ್ಷವನ್ನು ಪೂತಗೊಳಿಸಿದ್ದಾರೆ. ಜ್ಞಾನದ ನಿಕಷವೆಂದೇ ಪ್ರಸಿದ್ಧವಾದ ಕಾಶ್ಮೀರಕ್ಕೆ ಪುರಾಣದ ಹಿನ್ನೆಲೆಯೂ ಇದೆ. ‘ನೀಲಮತ’ವೆಂಬ ಪುರಾಣದಲ್ಲಿ ವರ್ಣಿಸಲಾಗಿರುವಂತೆ ಕಾಶ್ಮೀರವು ಕಶ್ಯಪ ಮುನಿಗಳಿಂದ ಸೃಷ್ಟಿಯಾದದ್ದು. ಹಾಗಾಗಿಯೇ ಇದನ್ನು ಕಶ್ಯಪರ ಮಗಳು ಅಥವಾ ‘ಕಾಶ್ಯಪೀ’ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಕಾಶ್ಯಪಿಯೇ ಕಾಶ್ಮೀರವಾಯಿತೆಂದು ಹೇಳಲಾಗುತ್ತದೆ. ಇನ್ನು ಕೆಲವರು ಶ್ರೀರಾಮಚಂದ್ರನು ಕಾಶ್ಮೀರವನ್ನು ತನ್ನ ಮಗನಾದ ಕುಶನಿಗೂ, ಲವಪುರಿ(ಇಂದಿನ ಲಾಹೋರ್)ಯನ್ನು ಲವನಿಗೂ ವಹಿಸಿ ಕೊಟ್ಟನು. ಹಾಗಾಗಿ ಕಾಶ್ಮೀರಕ್ಕೆ ಕುಶಪುರಿಯೆಂಬ ಇನ್ನೊಂದು ಹೆಸರಿದೆ ಎಂದು ಹೇಳುತ್ತಾರೆ. ನೀಲಮತ ಪುರಾಣವನ್ನೇ ಆಧರಿಸಿ ಕಲ್ಹಣನು ಬರೆದ ಕಾಶ್ಮೀರದ ರಾಜರ ಚರಿತ್ರೆಯಾದ ರಾಜತರಂಗಿಣಿಯಲ್ಲೂ ‘ಕಶ್ಯಪಪುರೀ’ ಎಂದು ಕಾಶ್ಮೀರವನ್ನು ಉಲ್ಲೇಖಿಸಲಾಗಿದೆ. ಕಾಶ್ಮೀರವು ಶಾರದೆಯ ನಿವಾಸವೆಂಬ ನಂಬಿಕೆ ನಮ್ಮ ಪೂರ್ವಜರದಾಗಿತ್ತು. ಅದಕ್ಕೆ ಪ್ರಮಾಣವೆಂಬಂತೆ, ಕಾಶ್ಮೀರವು ವಿದ್ವಾಂಸರ ಬೀಡಾಗಿತ್ತು. ವಿಶ್ವದ ಎಲ್ಲೆಡೆಯಿಂದ ಜ್ಞಾನದ ಪರೀಕ್ಷಣೆಗಾಗಿ ವಿದ್ವಾಂಸರು ಇಲ್ಲಿಗೆ ಬರುತ್ತಿದ್ದರು. 

ಪಂಡಿತ ಶಿವದತ್ತರಿಂದ ಸಂಪಾದಿಸಲ್ಪಟ್ಟ ನೈಷಧ ಕಾವ್ಯದ ಮುನ್ನುಡಿಯಲ್ಲಿ ಹೇಳಲಾಗಿರುವಂತೆ, ಕಾನ್ಯಕುಬ್ಜದ ರಾಜನಾದ ಜಯಚಂದ್ರನು ತನ್ನ ಆಸ್ಥಾನ ವಿದ್ವಾಂಸನೂ, ಶ್ರೇಷ್ಠ ಕವಿಯೂ ಆಗಿರುವ ಶ್ರೀಹರ್ಷನಲ್ಲಿ ಮಹಾಕಾವ್ಯವನ್ನು ರಚಿಸಲು ಆದೇಶಿಸಲಾಗಿ, ಹರ್ಷನು ನೈಷಧ-ಮಹಾಕಾವ್ಯವನ್ನು ರಚಿಸಿ ತರುತ್ತಾನೆ. ಆಗ ಅದರ ಪರೀಕ್ಷೆಗಾಗಿ ಆ ಮಹಾಕಾವ್ಯವನ್ನು ಕಾಶ್ಮೀರಕ್ಕೆ ಒಯ್ದು, ಶಾರದೆಯ ಹಸ್ತದಲ್ಲಿಟ್ಟು ಅಲ್ಲಿನ ಪಂಡಿತರೆದುರು ಪ್ರಸ್ತುತಪಡಿಸಬೇಕೆಂದು ರಾಜನು ಆದೇಶಿಸುತ್ತಾನೆ. ಹರ್ಷನು ಕಾಶ್ಮೀರಕ್ಕೆ ಹೋಗಿ ಅಲ್ಲಿರುವ ಶಾರದಾ ದೇವಿಯೆದುರು ಸಮರ್ಪಿಸಿ ಪರೀಕ್ಷೆಗೊಳಪಡಿಸುವ ಸಂದರ್ಭವನ್ನು ಉಲ್ಲೇಖಿಸಲಾಗಿದೆ. ಹೀಗೆ ದೇಶದ ಯಾವುದೇ ಭಾಗದಲ್ಲಿನ ವಿದ್ವಾಂಸರೂ ಕೂಡ ಕಾಶ್ಮೀರಕ್ಕೆ ಹೋಗಿ ತಮ್ಮ ವಿದ್ವತ್ತನ್ನು ಪರೀಕ್ಷೆಗೊಳಪಡಿಸಿ, ಪ್ರಮಾಣಿಸಲ್ಪಡಬೇಕಿತ್ತು. ಇಂಥ ಸಾಕ್ಷಾತ್ ಶಾರದಾ ದೇವಿಯ  ನೆಲೆಯೆಂದೇ ಭಾವಿಸಲ್ಪಡುತ್ತಿದ್ದ ಕಾಶ್ಮೀರವು ಭಾರತದ ಪವಿತ್ರ ಮುಕುಟವೂ, ಶ್ರದ್ಧಾಕೇಂದ್ರವೂ, ಒಂದು ಕಾಲದಲ್ಲಿ ಜ್ಞಾನದ ಸ್ರೋತಸ್ಸೂ ಆಗಿತ್ತು. 

ಕಾಶ್ಮೀರವು ಹೇಗೆ ಬೌದ್ಧಿಕವಾಗಿ ಶ್ರೀಮಂತವಾದ ನೆಲವಾಗಿತ್ತೋ ಹಾಗೆಯೇ ಭೌತಿಕವಾಗಿಯೂ ಕೂಡ ಸೌಂದರ್ಯದ ಖನಿ. ಅದನ್ನು ಅನೇಕ ಕವಿಗಳು ವರ್ಣಿಸಿದ್ದಾರೆ. ಈಗಲೂ ಕಾಶ್ಮೀರವಿರುವುದು ಹಾಗೆಯೇ. ಜೊತೆಗೆ ಅನೇಕ ಭಾರತೀಯ ಜ್ಞಾನಶಾಖೆಗಳು ಕಾಶ್ಮೀರದ ನೆಲದಿಂದಲೇ ಪೋಷಿತವಾಗಿ ಎಲ್ಲೆಡೆ ಪ್ರಸರಿಸಲ್ಪಟ್ಟಿವೆ. ಅಲಂಕಾರ ಶಾಸ್ತ್ರ (Science of Poetics) ದ ಅಂಕುರೋತ್ಪತ್ತಿಯಾಗಿದ್ದು ಇದೇ ನೆಲದಲ್ಲಿ. ಅನಂತರ ವಿಶ್ವದೆಲ್ಲೆಡೆ ಅದು ಹರಡಿತು. ಅಲಂಕಾರ ಶಾಸ್ತ್ರದಲ್ಲಿ ಕಾಶ್ಮೀರದವನೇ ಆದ ಆನಂದವರ್ಧನನ ಧ್ವನಿಸಿದ್ಧಾಂತದವರೆಗೆ ಅನೇಕ ಸಿದ್ಧಾಂತಗಳು ಈ ನೆಲದಲ್ಲಿ ವಿಕಸಿತವಾಗಿವೆ. ಅಷ್ಟೇ ಅಲ್ಲ, ಸಮಾಜಶಾಸ್ತ್ರ, ಸಂಗೀತ, ವೈದ್ಯಕೀಯ, ತತ್ತ್ವಶಾಸ್ತ್ರಗಳವರೆಗೆ ಜ್ಞಾನಶಾಖೆಗಳ ವಿಕಾಸ ಹಾಗೂ ಪೋಷಣೆಯಲ್ಲಿ ಕಾಶ್ಮೀರದ ಪಾತ್ರ ಬಹಳ ದೊಡ್ದದು. ಕಾಶ್ಮೀರಶೈವಸಿದ್ಧಾಂತವೆಂಬ ಹೊಸದೊಂದು ತತ್ತ್ವಶಾಸ್ತ್ರವನ್ನೇ ಈ ನೆಲವು ಜಗತ್ತಿಗೆ ಕೊಡಮಾಡಿದೆ. 

ಮುಸ್ಲಿಂ ಆಕ್ರಮಣದವರೆಗೆ ಅಂದರೆ ಹದಿನೈದನೆಯ ಶತಮಾನದವರೆಗೆ ಕಾಶ್ಮೀರದಲ್ಲಿ ಸಂಸ್ಕೃತವೇ ಮುಖ್ಯ ಭಾಷೆಯಾಗಿತ್ತು. ಅದಕ್ಕೆ ಪ್ರಮಾಣವಾಗಿ ನಾವು ಕಾಶ್ಮೀರೀ ಕವಿಗಳಿಂದ ಸಂಸ್ಕೃತದಲ್ಲಿ ರಚಿಸಲ್ಪಟ್ಟ ನೂರಾರು ಗ್ರಂಥಗಳನ್ನು ಹೆಸರಿಸಬಹುದು. ಮುಸ್ಲಿಂ ವಶಕ್ಕೆ ಸಿಗುವವರೆಗೆ ಎಲ್ಲ ರಾಜರುಗಳೂ ಸಂಸ್ಕೃತವನ್ನು ತಮ್ಮ ರಾಜಭಾಷೆಯನ್ನಾಗಿ ಹೊಂದಿದ್ದರು. ಕಾಶ್ಮೀರಿ ಭಾಷೆಯಲ್ಲಿ ಕೂಡ ಉಳಿದೆಲ್ಲ ಭಾರತೀಯ ಭಾಷೆಗಳಂತೆ ಸಂಸ್ಕೃತದ ಪದಗಳೇ ಹೆಚ್ಚಿವೆ. ಈಗ ಅಲ್ಲಿ ಕೇಳಿ ಬರುವುದೆಲ್ಲ ಒಂದೋ ಉರ್ದು ಅಥವಾ ಉರ್ದು ಮಿಶ್ರಿತ ಕಾಶ್ಮೀರಿ. ಸಂಸ್ಕೃತ ಭಾಷೆಯಲ್ಲಿ ರಚಿತವಾದ ಸಾಹಿತ್ಯಿಕ ಗ್ರಂಥಗಳ ವಿವರವನ್ನು ನಾವು ಕೆಳಗೆ ನೋಡಲಿಕ್ಕಿದ್ದೇವೆ. 

ವಿದೇಶೀ ಅಕ್ರಮಣದ ಅನಂತರ ಕಾಶ್ಮೀರವು ತನ್ನ ಸಂಪೂರ್ಣ ಸ್ವರೂಪವನ್ನೇ ವಿಕಾರಗೊಳಿಸಿಗೊಂಡಿದೆ. ಭಾಷೆ, ಬದುಕು ಎಲ್ಲವೂ ಬದಲಾಗಿದೆ. ಸಂಸ್ಕೃತ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ನದಿಗಳ ಹೆಸರು, ಸ್ಥಾನಗಳ ಹೆಸರು ಎಲ್ಲವೂ ಬದಲಾಗಿವೆ. ಅವುಗಳನ್ನೀಗ ಗುರುತಿಸುವುದೇ ಕಠಿನವಾಗಿದೆ. ಹಾಗಿದ್ದೂ ಕೆಲವು ಆಧುನಿಕ ಕಾಶ್ಮೀರೀ ಹೆಸರುಗಳ ಮೂಲಕ ಅವುಗಳನ್ನು ಕಂಡುಕೊಳ್ಳಬೇಕಿದೆಯಷ್ಟೇ. ಜಗತ್ತಿಗೇ ವೇದಾಂತೋಪದೇಶವನ್ನು ಮಾಡಿ ದಿಗ್ವಿಜಯವನ್ನು ಸಾಧಿಸಿ ದೇಶದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿದ ಶ್ರೀ ಆದಿಶಂಕರರು ಕಾಶ್ಮೀರದ ಶ್ರೀನಗರದಲ್ಲಿನ ಒಂದು ಪರ್ವತದಲ್ಲಿರುವ ಶಿವ ಮಂದಿರಕ್ಕೆ ಭೇಟಿ ಕೊಟ್ಟಿದ್ದರು. ಅವತ್ತಿನಿಂದ ಈ ಪರ್ವತವು ಶಂಕರಾಚಾರ್ಯ ಪರ್ವತವೆಂದೇ ಪ್ರಸಿದ್ಧವಾಯಿತು. ಈಗ ಅದನ್ನು ತಕ್ತ್-ಐ-ಸುಲೈಮನ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅದೇ ಪರ್ವತ, ಆದರೆ ಹೆಸರೂ ಬೇರೆ. ಅಲ್ಲಿರುವ ಜನರೂ ಬೇರೆ. 

ಪ್ರಾಚೀನ ಉಲ್ಲೇಖಗಳ ಮೂಲಕ ಈಗಿನ ಸ್ಥಳಗಳನ್ನು ಗುರುತಿಸುವುದಾದರೆ, ಈಗಿನ ಜೆವನ್ ಮೊದಲ ಜಯವನವಾಗಿತ್ತು ಎಂಬುದು ವಿಕ್ರಮಾಂಕದೇವಚರಿತದಿಂದ ತಿಳಿಯುತ್ತದೆ. ಹಾಗೆಯೇ ಈಗಿನ ಖುನ್ಮುಹ್, ತಕ್ಷಕ್, ರಮೊಟ್ಟಾಗಳು ಕ್ರಮವಾಗಿ ಬಿಲ್ಹಣನ ಕೃತಿಗಳಲ್ಲಿ ಖೋನಮುಖ, ತಕ್ಷಕಸರಸ್ ಮತ್ತು ರಮುಸಾ ಎಂಬುದಾಗಿ ವರ್ಣಿಸಲಾಗಿದೆ. ವಿತಸ್ತಾವು ಶಾದಿಪುರವೆಂದೂ, ವುಲರ್ ಲೇಕ್ ಎಂಬುದು ಉಳ್ಳೋಲವೂ ಆಗಿತ್ತು. ಈಗಿನ ಮಾನಸ್ಬಲ್ ಮತ್ತು ಬಾರಾಮುಲ್ಲಾಗಳು ಕ್ರಮವಾಗಿ ಮಾನಸಸರೋವರ ಮತ್ತು ವರಾಹಮೂಲಗಳೆಂದು ವರ್ಣಿಸಲ್ಪಟ್ಟಿವೆ. ಈಗಿನ ಬರ್ಕಟ್ ಎಂಬುದು ಸಾ.ಶ ೭೭೯ರಿಂದ ೮೧೩ರವರೆಗೆ ಆಳಿದ ಜಯಾಪೀಡನ ದ್ವಾರಾವತಿಯಾಗಿತ್ತು. ಹಾಗೆಯೇ ರಾಜತರಂಗಿಣಿಯಲ್ಲಿ ವರ್ಣಿತವಾದ ಸುರಪುರವು ಈಗ ಸೋಪುರ್ ಎಂದು ಕರೆಯಲ್ಪಡುತ್ತದೆ. 

ಕಾಶ್ಮೀರವನ್ನು ಕಶ್ಯಪ ಮುನಿಯು ಸೃಷ್ಟಿಸಿದ ಮೇಲೆ ಸಾವಿರಾರು  ವರ್ಷಗಳ ಕಾಲ ಹಿಂದೂ ರಾಜರುಗಳು ಆಳಿದರು. ಸಾಮಾನ್ಯ ಶಕ ಪೂರ್ವ ೨೧೮೦ರಲ್ಲಿ ರಾಜಾ ದಯಾಕರನ್ ಇದನ್ನು ಆಳಿದ ಮೊದಲ ರಾಜನೆಂದು ಹೇಳಲಾಗುತ್ತದೆ. ಆದರೆ ರಾಜತರಂಗಿಣಿಯಲ್ಲಿ ಸಾ.ಶ.ಪೂ ೧೧೮೪ರಿಂದ ಅಂದರೆ ಗೋನಂದರ ಸಾಮ್ರಾಜ್ಯದ ಕಾಲದಿಂದ ಉಲ್ಲೇಖಗಳು ದೊರೆಯುತ್ತವೆ. ಈ ಅವಧಿಯಲ್ಲಿ ಒಟ್ಟೂ ಇಪ್ಪತ್ತೊಂದು ರಾಜವಂಶಗಳು ಆಳಿ ಹೋಗಿವೆ ಎಂದು ಕಲ್ಹಣನು ತಿಳಿಸುತ್ತಾನೆ. 

ಸಾ.ಶ.ಪೂ ೨೭೩ರಿಂದ ೨೩೨ ರವರೆಗೆ ಭಾರತವನ್ನು ಆಳಿದ ಸಮ್ರಾಟ್ ಅಶೋಕನು ಸಾ.ಶ.ಪೂ ೨೫೦ ರಲ್ಲಿ ಕಾಶ್ಮೀರವನ್ನು ಗೆಲ್ಲುತ್ತಾನೆ. ಈತನ ಜೊತೆಗೆ ಕಾಶ್ಮೀರವನ್ನು ಬೌದ್ಧಮತವು ಪ್ರವೇಶಿಸುತ್ತದೆ. ಅನಂತರ ವಿಹಾರಗಳನ್ನು ಕಟ್ಟುವಲ್ಲಿ ಕುಶಲರಾದ ಝಲುಕ, ಹುವಿಷ್ಕ, ಝುಷ್ಕ ಮತ್ತು ಕನಿಷ್ಕರು ಆಳಿದರು. ಈ ಸಮಯದಲ್ಲಿ ಬೌದ್ಧಮತವು ನಾಲ್ಕೂ ದಿಕ್ಕಿನಲ್ಲಿ ಹರಡಿತು. ವಿಶೇಷವಾಗಿ ಕನಿಷ್ಕರ ಸಮಯದಲ್ಲಿ ಬೌದ್ಧಮತಕ್ಕೆ ಹೆಚ್ಚಿನ ಸ್ಥಾನ ದೊರೆಯಿತು. ಬೌದ್ಧದರ್ಶನದ ಕೃತಿಗಳ ರಚನೆಯಾಯಿತು. ಸಂಸ್ಕೃತ ಕೃತಿಗಳು ಪಾಲಿ ಭಾಷೆಯ ಮೂಲಕ ಟಿಬೆಟನ್ ಮತ್ತು ಚೈನೀಸ್ ಭಾಷೆಗೂ ಅನುವಾದಗೊಂಡವು. ಕೊನೆಗೆ ಐದು ನೂರು ವರ್ಷಗಳ ಅನಂತರ ಕಾಶ್ಮೀರದಲ್ಲಿ ಬೌದ್ಧಮತ ಕ್ಷೀಣಿಸಿತು. ಸಾ.ಶ. ೬೩೧ರಿಂದ ೬೩೩ರ ನಡುವೆ ಚೀನೀ ಯಾತ್ರಿಕ ಹ್ಯೂಯೆನ್ ತ್ಸ್ಯಾಂಗನು ಭಾರತಕ್ಕೆ ಭೇಟಿ ಕೊಟ್ಟ ಸಮಯದಲ್ಲಿ ಕಾಶ್ಮೀರದಲ್ಲಿ ಶೈವಮತ ಪ್ರಾಚುರ್ಯಕ್ಕೆ ಬಂದಿತ್ತು.

ಆರಂಭದಿಂದಲೂ ಹಿಂದೂ ರಾಜರುಗಳೇ ಕಾಶ್ಮೀರವನ್ನು ಆಳಿದ್ದರೂ ಸಾ.ಶ. ೫೦೦ರಿಂದ ಕಾಶ್ಮೀರದ ಹಿಂದೂಯುಗವೆಂದು ಪರಿಗಣಿಸಲಾಗುತ್ತದೆ. ಸಾ.ಶ. ೫೨೮ರಲ್ಲಿ ಮಿಹಿರ್ಕುಲನೂ, ಅನಂತರ ಗೋಪಾದಿತ್ಯನೂ ಹಿಂದೂ ಧರ್ಮದ ಪುನರುತ್ಥಾನಕ್ಕೆ ಕಾರಣರಾದರು. ಈ ಸಮಯದಲ್ಲಿ ಕಾಶ್ಮೀರದಲ್ಲಿ ಸಂಸ್ಕೃತ ಮತ್ತು ಅದರಲ್ಲಿನ ಸಾಹಿತ್ಯ ಸೃಷ್ಟಿಗೆ ಉತ್ತೇಜನವು ದೊರೆಯಿತು. ರಾಜರುಗಳೆಲ್ಲ ಜ್ಞಾನಪಕ್ಷಪಾತಿಗಳೂ, ಸಮರ್ಥರೂ ಆಗಿದ್ದರು. ಬಿಲ್ಹಣ, ಅಭಿನವಗುಪ್ತ ಕಲ್ಹಣ, ಕ್ಷೇಮೇಂದ್ರರಂಥ ಶ್ರೇಷ್ಠ ವಿಚಾರವಾದಿಗಳು, ರಾಜಕೀಯಪಟುಗಳು, ತತ್ತ್ವಜ್ಞಾನಿಗಳು, ಇತಿಹಾಸಕಾರರು ಕಾಶ್ಮೀರದಲ್ಲಿ ಜನ್ಮ ತಳೆದರು. ಇವರೆಲ್ಲರೂ ಸಂಸ್ಕೃತವನ್ನೂ, ಭಾರತೀಯ ವಿದ್ಯಾಶಾಖೆಗಳನ್ನೂ ಪೋಷಿಸಿದರು. ಕಾಶ್ಮೀರವು ಶಾರದಾಪೀಠವಷ್ಟೇ ಅಲ್ಲದೇ ಸರ್ವಜ್ಞಪೀಠವೂ ಆಗಿ ರಾರಾಜಿಸುತ್ತಿತ್ತು. ಈ ಅವಧಿಯಲ್ಲಿಯೇ ದೇಶದ ನಾನಾ ಭಾಗಗಳಿಂದ ವಿದ್ವಾಂಸರು ಕಾಶ್ಮೀರಕ್ಕೆ ಭೇಟ ಕೊಟ್ಟರು. ಹರ್ಷವರ್ಧನನ ಆಸ್ಥಾನ ಕವಿಯಾದ ಬಾಣಭಟ್ಟ ಮತ್ತು ಮಯೂರರಿಬ್ಬರನ್ನೂ ಅವರಿಬ್ಬರ ವಿವಾದದ ಪರಿಹಾರಕ್ಕಾಗಿ ಕಾಶ್ಮೀರಕ್ಕೆ ಕಳಿಸಿಕೊಡಲಾಯಿತೆಂದು ತಿಳಿದುಬರುತ್ತದೆ. 

ಹಿಂದೂ ರಾಜರುಗಳ ಕಾಲದಲ್ಲಿ ಕಾಶ್ಮೀರದಲ್ಲಿ ಸಾಹಿತ್ಯ, ಶಿಲ್ಪ, ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಈ ಕಾಲಘಟ್ಟದ ಮುಖ್ಯ ರಾಜರುಗಳೆಂದರೆ, ಏಳನೆಯ ಶತಮಾನದಲ್ಲಿದ್ದ ಎರಡನೆಯ ಪ್ರವರಸೇನ, ಅನಂತರ ಲಲಿತಾದಿತ್ಯ ಮುಕ್ತಾಪೀಡ (ಸಾ.ಶ. ೬೯೯ರಿಂದ ಸಾ.ಶ ೭೩೬) , ಅವಂತಿವರ್ಮನ್ (೮೫೫-೮೮೪), ಶಂಕರವರ್ಮನ್ (೮೮೪-೯೦೨), ರಾಣಿ ದಿಡ್ಡಾ (೯೫೦-೧೦೦೩). ಸಾ.ಶ. ೧೩೨೨ರಲ್ಲಿ ತುರುಕರು ಕಾಶ್ಮೀರದ ಮೇಲೆ ಆಕ್ರಮಣ ಮಾಡುವವರೆಗೆ ಕಾಶ್ಮೀರವು ಸುವರ್ಣಯುಗವನ್ನು ಕಂಡಿತು. ಅನಂತರ ಶುರುವಾದದ್ದೇ ರಕ್ತಮಯ ಇತಿಹಾಸ. ಹಾಗಾಗಿ ಕಾಶ್ಮೀರದ ನೆಲದಲ್ಲಿ ಏಳುನೂರು ವರ್ಷಗಳಿಂದಲೂ ಮತಾಂಧ ದಾಳಿಕೋರರು ಹಾಗೂ ಮೂಲನಿವಾಸಿಗಳಾದ ಹಿಂದೂಗಳ ನಡುವೆ ಯುದ್ಧ ನಡೆಯುತ್ತಲೇ ಬಂದಿದೆ. ಈಗ ಯುದ್ಧ ಮಾಡಲು ಯಾರೂ ಇರದಂತೆ ಎಲ್ಲ ಹಿಂದೂಗಳನ್ನೂ ಮೂಲಭೂತವಾದಿಗಳು ಹಿಂಸಾತ್ಮಕವಾಗಿ ನಿಖಾಲಿ ಮಾಡುವ ಮೂಲಕ ಶಾರದೆಯ ಸ್ಥಾನದಲ್ಲೀಗ ಹಿಂದೂಗಳೇ ಇಲ್ಲವಾಗಿ ಹೋಗಿದ್ದಾರೆ. 

ಕಾಶ್ಮೀರದ ವಿದ್ವಾಂಸರು/ಕವಿಗಳು : ನಾಟ್ಯಶಾಸ್ತ್ರದ ಪ್ರವರ್ತಕನಾದ ಭರತನಿಂದಾರಂಭಿಸಿ ಸಾಹಿತ್ಯಲೋಕಕ್ಕೆ ಕಾಶ್ಮೀರದ ಕೊಡುಗೆ ಅನನ್ಯ. ಅಗ್ನಿಪುರಾಣದಿಂದಾರಂಭವಾಗುವ ಕಾವ್ಯಶಾಸ್ತ್ರಕ್ಕೊಂದು ಸ್ಪಷ್ಟವಾದ ರೂಪುಕೊಡುವಲ್ಲಿ ಕಾಶ್ಮೀರಿಗಳಾದ ಭರತ ಭಾಮಹರಿಬ್ಬರೂ ಮಹತ್ತ್ವದ ಪಾತ್ರವನ್ನು ವಹಿಸಿದ್ದಾರೆ. ಅಲಂಕಾರಶಾಸ್ತ್ರದಲ್ಲಿನ ಅನೇಕ ಸಂಪ್ರದಾಯಗಳು ಹುಟ್ಟಿಕೊಂಡಿದ್ದೇ ಕಾಶ್ಮೀರಿ ಕವಿಗಳಿಂದ. ವಾಮನ ರೀತಿಸಂಪ್ರದಾಯವನ್ನೂ, ಭಟ್ಟನಾಯಕನು ರಸಸಂಪ್ರದಾಯವನ್ನೂ, ಕುಂತಕನು ವಕ್ರೋಕ್ತಿ ಸಂಪ್ರದಾಯವನ್ನೂ, ಆನಂದವರ್ಧನನು ಧ್ವನಿಸಂಪ್ರದಾಯವನ್ನೂ, ಕ್ಷೇಮೇಂದ್ರನು ಔಚಿತ್ಯಸಂಪ್ರದಾಯವನ್ನೂ ಆರಂಭಿಸಿದನು. ಇವರೆಲ್ಲರೂ ಕಾಶ್ಮೀರಿಗಳೇ. ಧ್ವನಿಸಂಪ್ರದಾಯವನ್ನು ವಿಸ್ತರಿಸಿದ ಅಭಿನವಗುಪ್ತನೂ ಕಾಶ್ಮೀರಿಯೇ. ಉದ್ಭಟ ಮತ್ತು ವಾಮನರಿಬ್ಬರೂ ಕಾವ್ಯಶಾಸ್ತ್ರದ ಕಾಶ್ಮೀರೀ ಸಂಪ್ರದಾಯದ ಮೂಲ ಬೀಜಕ್ಷೇಪವನ್ನು ಮಾಡಿದವರು. ಅನಂತರ ಇದು ಆನಂದವರ್ಧನನ ಮೂಲಕ ಪಲ್ಲವಿಸಿತು. 

ಅನಂತರ ಬಂದ ಲೋಲ್ಲಟ, ಭಟ್ಟನಾಯಕ, ಶಂಕುಕರೆಲ್ಲ ಸ್ವತಂತ್ರವಾಗಿ ರಸಸಂಪ್ರದಾಯವನ್ನು ಪೋಷಿಸಿದ ಕಾಶ್ಮೀರದ ದಿಗ್ಗಜರು.  ಸಾ.ಶ. ೮೨೫ರಿಂದ ೮೭೫ರ  ಕಾಲದಲ್ಲಿದ್ದ ಕಾವ್ಯಾಲಂಕಾರ ಸಂಪ್ರದಾಯದ ರುದ್ರಟನೂ ಕಾಶ್ಮೀರಿ. ಧ್ವನ್ಯಾಲೋಕದ ಟೀಕೆಯಾದ ‘ಧ್ವನಿಗಾಥಾಪಂಜಿಕಾ’ದ ಕರ್ತೃ ರತ್ನಾಕರ (ಸಾ.ಶ.೧೦೦೦-೧೦೫೦), ‘ಅಭಿಧಾವೃತ್ತಿಮಾತೃಕಾ’ದ ಕರ್ತೃ ಮುಕುಲಭಟ್ಟ (ಸಾ.ಶ. ೮೫೦-೯೦೦), ‘ಕಾವ್ಯಪ್ರಕಾಶ’ವನ್ನು ಬರೆದ ಮಮ್ಮಟ (೧೦೫೦-೧೧೦೦). ‘ಅಲಂಕಾರಸರ್ವಸ್ವ’ವನ್ನು ಬರೆದ ರುಯ್ಯಕ (೧೧೨೫-೧೧೭೫), ‘ಅಲಂಕಾರೋದಾಹರಣ’ದ ಕರ್ತೃ ಜಯರಥ (೧೨೦೦-೧೨೫೦), ಹದಿನಾರನೆಯ ಶತಮಾನದಲ್ಲಿ ‘ಅಲಂಕಾರರತ್ನಾಕರ’ವನ್ನು ರಚಿಸಿದ ಶೋಭಾಕರಮಿತ್ರ ಇಂಥ ಶ್ರೇಷ್ಠ ವಿದ್ವಾಂಸರುಗಳೆಲ್ಲ ಕಾಶ್ಮೀರದವರು. 

ಮೆಂಥ, ಭೂಮಕ, ರಾಜಾನಕ ರತ್ನಾಕರ, ಅಭಿನಂದ, ಶಿವಸ್ವಾಮಿ, ಶ್ಯಾಮಲಾ, ಮೂವತ್ತೈದಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಕ್ಷೇಮೇಂದ್ರ, ಸೋಮದೇವ, ಶಂಭು ಮಹಾಕವಿ, ಮಂಖ, ವಾಸುದೇವಕವಿ, ಜಯಾನಕ, ಶ್ರೀವರ, ಗೋನಂದ, ಮುಕ್ತಾಪೀಡ, ಕೈಯ್ಯಟ, ವಲ್ಲಟ, ಪಾಂಡುದಾಸ, ಕಲ್ಹಣ, ಜಿಂದುಕ, ಲೌಲಿಕ, ಭಾಗವತ ಅಮೃತದತ್ತ, ಪಂಡಿತ ಶ್ರೀಬಕ, ರಾಜಾನಕ ಕಮಲಾಕರ, ರಾಜಾನಕ ವಿಜಯಪಾಲ, ಭಟ್ಟಮಲ್ಲಟ, ರಲ್ಹಣ, ಅರ್ಗತ ಇವರೆಲ್ಲ ಕಾಶ್ಮೀರದಲ್ಲಿಯೇ ಜನ್ಮವನ್ನು ತಳೆದು ಕಾವ್ಯವನ್ನೂ ಶಾಸ್ತ್ರೀಯ ಕೃತಿಗಳನ್ನೂ ರಚಿಸಿ ಪ್ರಪಂಚದಾದ್ಯಂತ ಕಾಶ್ಮೀರವನ್ನೂ, ಭಾರತವನ್ನೂ ಪ್ರಸಿದ್ಧಗೊಳಿದವರು. ಇಂದಿಗೂ ಇವರಲ್ಲಿ ಹೆಚ್ಚಿನವರ ಉಪಲಬ್ಧ ಗ್ರಂಥಗಳನ್ನು ಪ್ರಮಾಣಗ್ರಂಥಗಳನ್ನಾಗಿ ಅಭ್ಯಸಿಸಲಾಗುತ್ತದೆ.  ಕಾಶ್ಮೀರದ ಜ್ಞಾನಪರಂಪರೆಯು ಅಷ್ಟು ಆಳವಾದುದಾಗಿದೆ. 

ಇಷ್ಟೇ ಅಲ್ಲ ಭಾಷಾಶಾಸ್ತ್ರದಲ್ಲೂ ಕೂಡ ಕಾಶ್ಮೀರದ ವಿದ್ವಾಂಸರುಗಳ ಕೊಡುಗೆ ಅನನ್ಯ. ಆ ಮೂಲಕ ಪರೋಕ್ಷವಾಗಿ ಭಾರತೀಯ ಭಾಷೆಗಳ ವಿಕಾಸಕ್ಕೂ ಅವರು ಕಾರಣರಾಗಿದ್ದಾರೆ. ಸಂಸ್ಕೃತದ ವ್ಯಾಕರಣ ಕ್ಷೇತ್ರದಲ್ಲಿ ಸಾ.ಶ.೪೦೦-೫೦೦ ರ ಅವಧಿಯಲ್ಲಿದ್ದ ಚಂದ್ರ ಎಂಬ ವೈಯ್ಯಾಕರಣನು ಒಬ್ಬ ಕಾಶ್ಮೀರೀ ವಿದ್ವಾಂಸ. ಚಂದ್ರವ್ಯಾಕರಣ ಪದ್ಧತಿಯು ಈತನದೇ ಎಂದು ಹೇಳಲಾಗುತ್ತದೆ. ಹಾಗೆಯೇ ಭಾಮಹನು ಪ್ರಾಕೃತ ಭಾಷೆಗೆ ಸಂಬಂಧಿಸಿದ ‘ಪ್ರಾಕೃತಮನೋರಮಾ’ ಮತ್ತು ‘ಪ್ರಾಕೃತಪ್ರಕಾಶಟೀಕಾ’ ಎಂಬ ಎರಡು ವ್ಯಾಕರಣ ಗ್ರಂಥಗಳನ್ನು ರಚಿಸಿದ್ದಾನೆ. ಇನ್ನು ಸಾ.ಶ. ೭೫೦-೮೦೦ ರ ಕಾಲಘಟ್ಟದಲ್ಲಿ ಜಯಾದಿತ್ಯನು ಪಾಣಿನೀಯ ವ್ಯಾಕರಣ ಪರಂಪರೆಯಲ್ಲಿ ‘ಕಾಶಿಕಾವೃತ್ತಿ’ ಎಂಬ ಗ್ರಂಥವನ್ನು ಬರೆದನು. ಅನಂತರ ಎಂಟನೆಯ ಶತಮಾನದಲ್ಲಿ ರಾಜ ಜಯಾಪೀಡನ ಆಸ್ಥಾನದಲ್ಲಿದ್ದ ಕ್ಷೀರಸ್ವಾಮಿ ಎಂಬ ವೈಯ್ಯಾಕರಣನು ಮೂರು ವ್ಯಾಕರಣ ಗ್ರಂಥಗಳನ್ನು ಬರೆದಿದ್ದಾನೆ. ವ್ಯಾಕರಣ ಕ್ಷೇತ್ರದಲ್ಲಿ ಅತ್ಯಂತ ಪ್ರಸಿದ್ಧನಾಗಿರುವ ಶ್ರೇಷ್ಠ ವಿದ್ವಾಂಸನಾದ ಕೈಯ್ಯಟ (ಸಾ.ಶ.೧೦೫೦-೧೧೦೦)ನು ಪತಂಜಲಿಯ ಮಹಾಭಾಷ್ಯದ ಮೇಲೆ ಭರ್ತೃಹರಿಯ ವಾಕ್ಯಪದೀಯದ ಆಧಾರದಲ್ಲಿ ‘ಭಾಷ್ಯಪ್ರದೀಪ’ವೆಂಬ ವ್ಯಾಖ್ಯಾನವನ್ನು ಬರೆದಿದ್ದಾನೆ. ಇವನ ಅನಂತರ ಜಯದೇವಮಿಶ್ರ (ಸಾ.ಶ ೧೧೦೦-೧೧೫೦), ನಾಗ (೧೧೦೦-೧೧೫೦), ಜಿನೇಂದ್ರಬುದ್ಧಿ (೧೧೫೦-೧೨೦೦), ಜಗದ್ಧರ (೧೩೫೦-೧೪೦೦), ಉಗ್ರಭೂತಿ (೧೩೫೦-೧೪೦೦) ಮುಂತಾದವರು ತಮ್ಮ ಪಾಂಡಿತ್ಯಪೂರ್ಣವಾದ ಕೊಡುಗೆಯಿಂದ ಭಾಷಾಶಾಸ್ತ್ರವನ್ನು ಸಮೃದ್ಧಗೊಳಿಸಿದ್ದಾರೆ. 

ಸಾಹಿತ್ಯಶಾಸ್ತ್ರ, ಭಾಷಾಶಾಸ್ತ್ರವಷ್ಟೇ ಅಲ್ಲದೇ ವೇದಭಾಷ್ಯ, ತಂತ್ರಶಾಸ್ತ್ರ, ಇತಿಹಾಸ, ತತ್ತ್ವಶಾಸ್ತ್ರಗಳ ಕ್ಷೇತ್ರದಲ್ಲೂ ಕಾಶ್ಮೀರದ ವಿದ್ವಾಂಸರ ಕಾರ್ಯ ಸ್ಮರ್ತವ್ಯವಾದುದಾಗಿದೆ.  ಜಗತ್ತಿಗೆ ಉಪನಿಷತ್ತುಗಳ ಸಾರವನ್ನು ತಿಳಿಸಿ, ತತ್ತ್ವಶಾಸ್ತ್ರದಲ್ಲಿ ಮೂರ್ಧನ್ಯವಾದ ವೇದಾಂತಸಿದ್ಧಾಂತವನ್ನು ಪ್ರತಿಷ್ಠಾಪಿಸಿದ ಶ್ರೀಶಂಕರಾಚಾರ್ಯರು ಕಾಶ್ಮೀರದಲ್ಲಿಯೇ ಸೌಂದರ್ಯಲಹರಿಯನ್ನು ರಚಿಸಿದರೆಂದೂ ಹೇಳಲಾಗುತ್ತದೆ. ಕಾಶ್ಮೀರವು ತತ್ತ್ವಶಾಸ್ತ್ರದ ಕ್ಷೇತ್ರದಲ್ಲಿ ಕಾಶ್ಮೀರಶೈವದರ್ಶನವೆಂಬ ಹೊಸದೊಂದು ತತ್ತ್ವಶಾಸ್ತ್ರವನ್ನೇ ಪ್ರಪಂಚದ ಕೈಗಿಟ್ಟಿದೆ. ಇದರಲ್ಲಿ ಸಂಸಾರ, ಬಂಧ, ಮೋಕ್ಷ, ಪ್ರಪಂಚದ ಸೃಷ್ಟಿ, ಸ್ಥಿತಿ, ಸಂಹಾರಗಳ ಬಗ್ಗೆ, ಆತ್ಮಸ್ವರೂಪದ ಬಗ್ಗೆ ಸೇರಿದಂತೆ ತತ್ತ್ವಶಾಸ್ತ್ರೀಯವಾದ ಅನೇಕ ಆಳವಾದ ವಿಚಾರಗಳು ದೊರೆಯುತ್ತವೆ. ಈ ದರ್ಶನದ ಪ್ರಮುಖ ಪ್ರತಿಪಾದಕರಲ್ಲಿ ಅಭನವಗುಪ್ತನನ್ನು ಹೆಸರಿಸಬಹುದು. ಈತ ಒಟ್ಟೂ ನಲವತ್ತೆರಡು ಕೃತಿಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಮೂವತ್ತೇಳು ಕೃತಿಗಳು ತತ್ತ್ವಶಾಸ್ತ್ರಕ್ಕೆ ಸಂಬಂಧಸಿದವು. ಕಾಶ್ಮೀರಶೈವದರ್ಶನವು ಕಾಶ್ಮೀರದ ಜ್ಞಾನಪರಂಪರೆಯ ಮುಖ್ಯ ಅಂಗವಾಗಿದೆ.

ಒಟ್ಟಿನಲ್ಲಿ, ಒಂದು ಕಾಲದಲ್ಲಿ ಕಾಶ್ಮೀರವು ಬೌದ್ಧಿಕತೆ, ಜ್ಞಾನ-ವಿಜ್ಞಾನಗಳ ನೆಲೆವೀಡಾಗಿತ್ತು. ಅಲ್ಲಿ ಹೆಜ್ಜೆ ಹೆಜ್ಜೆಗೂ ಭಾರತೀಯ ಸಂಸ್ಕೃತಿಯ ಒಂದೊಂದು ಮುಖವನ್ನು ಕಾಣುವ ಅವಕಾಶವಿತ್ತು. ಇಡೀ ಪ್ರಪಂಚಕ್ಕೆ ಜ್ಞಾನದ ಮೂಲಕ ಬೆಳಕು ತೋರಿದ ನೆಲ ಕಾಶ್ಮೀರ. ಇಡೀ ವಿದ್ವದ್ವಲಯದ ನಿಕಷಪ್ರಾಯವಾಗಿದ್ದ ಕಾಶ್ಮೀರದಲ್ಲಿ ಸಾಕ್ಷಾತ್ ಶಾರದೆಯೇ ನೆಲೆಸಿದ್ದ ಕಾಲಘಟ್ಟವೊಂದಿತ್ತು. ಅಲ್ಲಿಂದ ಇವತ್ತಿನವರೆಗೆ ಕಾಶ್ಮೀರದಲ್ಲಿ ಬಹಳವೇ ವ್ಯತ್ಯಾಸವಾಗಿದೆ. ನಮಗಿಂದು ಕಾಶ್ಮೀರವೆಂದ ಕೂಡಲೇ ಕೇವಲ ಪ್ರಾಕೃತಿಕ ಸೌಂದರ್ಯ ಮಾತ್ರ ನೆನಪಿಗೆ ಬರುತ್ತದೆ. ಆದರೆ ವಿಶ್ವಕ್ಕೇ ಮಾರ್ಗವನ್ನು ದರ್ಶಿಸುವಂಥ ಸ್ಥಿತಿಯಲ್ಲಿದ್ದ ಕಾಶ್ಮೀರದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಯಾವ ಮಣ್ಣಿನಲ್ಲಿ ತತ್ತ್ವಶಾಸ್ತ್ರದ ಗಂಭೀರವಾದ ಚರ್ಚೆಗಳು ಮುಕ್ತವಾಗಿ ನಡೆಯುತ್ತಿದ್ದವೋ ಅದೇ ನೆಲದಲ್ಲೀಗ ಕ್ರೌರ್ಯ, ಅಜ್ಞಾನ, ಕತ್ತಲೆ ಆವರಿಸಿದೆ. ಜಗತ್ತಿಗೆ ಬೆಳಕನ್ನು ನೀಡುತ್ತಿದ್ದ ನೆಲವೀಗ ಸ್ವಯಂ ಕತ್ತಲೆಯಲ್ಲಿದೆ. 

ಕಾಶ್ಮೀರ್ ಫೈಲ್ಸ್ ಚಲನಚಿತ್ರದ ಮೂಲಕ ನಮ್ಮೆಲ್ಲರ ಹೃದಯದಲ್ಲಿ ಕಾಶ್ಮೀರವು ಸಣ್ಣದೊಂದು ಕಂಪನವನ್ನು ಹುಟ್ಟುಹಾಕಿದೆ. ಆದರೆ ಮತ್ತೆ ಎಂದಾದರೂ ಕಾಶ್ಮೀರದ ಗತವೈಭವ ಮರಳಲು ಸಾಧ್ಯವೇ? ಆ ನೆಲದಲ್ಲಿ ಮತ್ತೆ ಕಾವ್ಯ ಚಿಗುರಲು ಸಾಧ್ಯವೇ? ತತ್ತ್ವಶಾಸ್ತ್ರೀಯ ಚಿಂತನೆಗಳು ಮತ್ತೆ ಕಿವಿಗೆ ಬೀಳಲು ಸಾಧ್ಯವೇ? ಹೋಗಲಿ, ಮನುಷ್ಯಪ್ರಾಣಿ ನೆಮ್ಮದಿಯಿಂದ ತನ್ನ ತನ್ನ ಸಂಪ್ರದಾಯ, ನಂಬಿಕೆಗಳ ಜೊತೆ ಬದುಕಲಾದರೂ ಸಾಧ್ಯವೇ? ಇಲ್ಲವೇ ಇಲ್ಲ. ಕಳೆದದ್ದು ಕಳೆದೇ ಹೋಗುತ್ತದೆ. ಸ್ವಾತಂತ್ರ್ಯ ಬಂದ ಮೇಲೆ ಎಪ್ಪತ್ತು ವರ್ಷಗಳ ಅನಂತರ ಇದೇ ಮೊದಲಿಗೆಂಬಂತೆ ಅಂಬೇಡ್ಕರ್ ರಚಿತ ಸಂವಿಧಾನ ಆ ನೆಲದಲ್ಲಿ ಜಾರಿಗೆ ಬರುತ್ತಿದೆ ಎಂಬ ವಿಚಾರ ನಮಗೆ ಆಶ್ಚರ್ಯವನ್ನು ಹುಟ್ಟಿಸುವುದಿಲ್ಲವಾದರೆ ನಾವೆಲ್ಲ ಯಾವ ಜಗತ್ತಿನಲ್ಲಿ ಬದುಕುತ್ತಿದ್ದೇವೆ? 
ಕಾಶ್ಮೀರವನ್ನು ನೆನೆದರೆ ಮಾತ್ರ ಸಾಲದು, ಭವಿಷ್ಯತ್ತಿನ ಬಗ್ಗೆ ಜಾಗೃತಿಯೂ ಮೂಡಬೇಕು. ಸಮಾಜ ಕಣ್ಣು ತೆರೆಯಬೇಕು.

 ಕಾಶ್ಮೀರ ಈ ದೇಶದ ಸಂಸ್ಕೃತಿಯ ಶ್ರೇಷ್ಠ ಗುರುತು. ಅದರ ಇತಿಹಾಸದ ಸಮೃದ್ಧಿ ನಮಗೆ ಅಭಿಮಾನವನ್ನು ಮೂಡಿಸಬೇಕು. ಹಾಗೆಯೇ ಇತಿಹಾಸದಲ್ಲಿ ಮುಚ್ಚಲ್ಪಟ್ಟ ವಾಸ್ತವವು ಭವಿಷ್ಯತ್ತಿನ ಬಗೆಗೆ ಎಚ್ಚರವನ್ನು ಮೂಡಿಸಬೇಕು. ಯಾಕೆಂದರೆ, ಓಡಿ ಹೋಗಲು ನಮಗೆ ಮತ್ತೆಲ್ಲೂ ಜಾಗ ಉಳಿದಿಲ್ಲ.

💛 *ಹೋಳಿ ಹಬ್ಬದ ಕುರಿತಾಗಿರುವಂತಹ ಕೆಲವು ಆಸಕ್ತಿದಾಯಕ ಸಂಗತಿಗಳೇನು ಗೊತ್ತಾ?* 💙

          ‌💛 *ಹೋಳಿ ಹಬ್ಬದ ಕುರಿತಾಗಿರುವಂತಹ ಕೆಲವು ಆಸಕ್ತಿದಾಯಕ ಸಂಗತಿಗಳೇನು ಗೊತ್ತಾ?* 💙

ಪವಿತ್ರವಾದ ಧಾರ್ಮಿಕ ಹಿನ್ನೆಲೆಯನ್ನು ಒಳಗೊಂಡಿರುವ ಹೋಳಿ ಹಬ್ಬದ ಆಚರಣೆಯ ಹಿಂದೆ ಕೆಲವು ಆಸಕ್ತಿದಾಯ ಸಂಗತಿಗಳು ಅಡಗಿವೆ. ಅವುಗಳೇನು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಹೋಳಿ ಹಬ್ಬ ಎಂದರೆ ಜೀವನದಲ್ಲಿ ಸಂತೋಷವನ್ನು ಹಾಗೂ ಹೊಸ ಬಣ್ಣವನ್ನು ನೀಡುವ ಪವಿತ್ರವಾದ ಘಳಿಗೆ. ಪ್ರಕಾಶಮಾನವಾಗಿ ಹೊಳೆಯುವ ದೀಪಗಳು, ಬಣ್ಣ ಬಣ್ಣ ಬಣ್ಣದ ನೀರನ್ನು ತುಂಬಿಕೊಂಡ ಪಿಚಕಾರಿ, ಮನೆಯ ಮುಂದೆ ಜೋಡಿಸುವ ವಿಶೇಷ ಕಲಾಕೃತಿಯ ಆಕಾಶ ಬುಟ್ಟಿಗಳು ಹಾಗೂ ಮನೆಯಲ್ಲಿ ನೆಲೆಸುವ ಸಂಭ್ರಮದ ವಾತಾವರಣವು ವಿಶೇಷ ಸಂತೋಷವನ್ನು ನೀಡುತ್ತವೆ.

ವರ್ಣರಂಜಿತವಾದ ಈ ಹಬ್ಬದಲ್ಲಿ ಜನರು ಪರಸ್ಪರ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಈ ವಿಭಿನ್ನವಾದ ಹಬ್ಬದ ಆಚರಣೆಯನ್ನು ಭಾರತ ಹಾಗೂ ನೇಪಾಳದಲ್ಲಿ ಮಾತ್ರ ಆಚರಿಸುವುದನ್ನು ಕಾಣಬಹುದು. 

*ಹೋಳಿ ಹೆಸರಿನ ಮೂಲ*

ಹಿರಣ್ಯ ಕಶಿಪು ಎನ್ನುವ ದುಷ್ಟ ರಾಜನಿಗೆ ವಿಷ್ಣು ಭಕ್ತನಾದ ಪ್ರಹ್ಲಾದ ಎನ್ನುವ ಮಗನಿದ್ದನು. ಅವನು ತಂದೆಯ ಮಾತನ್ನು ಕೆಳದೆ ಸದಾ ಕಾಲ ವಿಷ್ಣುವಿನ ಧ್ಯಾನ ಹಾಗೂ ಆರಾಧನೆಯನ್ನು ಮಾಡುತ್ತಿದ್ದನು. ಮಗನಿಗೆ ವಿಷ್ಣುವಿನ ಧ್ಯಾನ ಮಾಡದಂತೆ ಹಿರಣ್ಯ ಕಶ್ಯಪು ಆಜ್ಞೆಯನ್ನು ಮಾಡಿದನು. ಆದರೆ ಅದ್ಯಾವುದೂ ಸಫಲವಾಗದೆ ಹೋಯಿತು. ನಂತರ ಕೆಲವು ದುಷ್ಕೃತ್ಯವನ್ನು ಮಗನ ವಿರುದ್ಧವಾಗಿ ಮಾಡುವುದರ ಮೂಲಕ ಅವನಿಗೆ ಪಾಠ ಕಲಿಸಲು ಮುಂದಾದನು. ಆಗಲೂ ಸಹ ಯಾವುದೇ ಸಂಗತಿಗಳು ಫಲಕಾರಿಯಾಗಲಿಲ್ಲ. ನಂತರ ತನ್ನ ತಂಗಿ ಹೋಲಿಕಾಳ ಬಳಿ ಹೋದನು.

ಹೋಲಿಕಾ ತನ್ನ ತೊಡೆಯ ಮೇಲೆ ಯಾರು ಕುಳಿತುಕೊಳ್ಳುತ್ತಾರೋ ಅವರನ್ನು ಸುಡುವ ಶಕ್ತಿಯನ್ನು ಪಡೆದುಕೊಂಡಿದ್ದಳು.
ಹಾಗಾಗಿ ಪ್ರಹ್ಲಾದನನ್ನು ಸಹ ತನ್ನ ತೊಡೆಯ ಮೇಲೆ ಕುಳಿಸಿಕೊಳ್ಳಲು ಹೇಳಿದನು. ಅಣ್ಣನ ಮಾತಿನಂತೆ ಹೋಲಿಕಾ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡನು. ಆದರೆ ಪ್ರಹ್ಲಾದ ಹರಿಯ ಸ್ಮರಣೆಯನ್ನು ಮಾಡುತ್ತಲೇ ಇದ್ದುದರಿಂದ ಹೋಲಿಕಾ ಸುಟ್ಟು ಭಸ್ಮವಾದಳು. ಪ್ರಹ್ಲಾದ ಬೆಂಕಿಯಿಂದ ಹೊರಗೆ ಬಂದನು ಎಂದು ಹೇಳಲಾಗುವುದು. ಹೋಲಿಕಾಳ ದಹನದ ಹಿನ್ನೆಲೆಯಲ್ಲಿಯೇ ಹೋಳಿ ಹಬ್ಬವನ್ನು ಆಚರಿಸಲಾಯಿತು. ಹಬ್ಬಕ್ಕೆ ಹೋಳಿ ಎನ್ನುವ ಹೆಸರು ಬಂತು ಎಂದು ಧಾರ್ಮಿಕ ಕತೆಯು ತಿಳಿಸುತ್ತದೆ.

*ಸತ್ಯಕ್ಕೆ ಎಂದೂ ಸಲ್ಲುವ ಜಯ*
ಈ ಹಬ್ಬವನ್ನು ಅಜ್ಞಾನ, ಕೆಟ್ಟ ಸಂಗತಿ ಹಾಗೂ ಸುಳ್ಳಿನ ವಿರುದ್ಧವಾಗಿ ಸತ್ಯ, ಧರ್ಮ ಮತ್ತು ಉತ್ತಮ ಸಂಗತಿಯು ಸಾಧಿಸಿದ ಜಯ ಎಂದು ಪರಿಗಣಿಸಲಾಗುವುದು. ನೇಪಾಳದ ಜನರು ಹೋಳಿ ಹಬ್ಬವು ಒಳ್ಳೆಯ ಚಿಂತನೆಗಳಿಗೆ ಹಾಗೂ ವಿಷಯಕ್ಕೆ ಸಂದ ಜಯದ ಸಂಭ್ರಮ ಎಂದು ಆಚರಿಸುತ್ತಾರೆ. ನೇಪಾಳಿಯನ್ನರು ಹೋಳಿ ಹಬ್ಬವನ್ನು ಆಚರಿಸಿದ ಮರುದಿನ ಭಾರತದಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.

*ಪೂತನಿಯ ಸಂಹಾರ*
ಶ್ರೀಕೃಷ್ಣ ದೇವನು ಶಿಶುವಾಗಿರುವಾಗ ಕಂಸ ರಾಜನು ಪೂತನಿಯನ್ನು ಸಾಯಿಸಲು ಕಳುಹಿಸಿದ್ದನು. ಆಗ ಬಾಲ ಕೃಷ್ಣನು ರಾಕ್ಷಸಿಯ ಹಾಲಿನೊಂದಿಗೆ ರಕ್ತವನ್ನು ಹೀರಿದನು. ಆದ್ದರಿಂದಲೇ ಕೃಷ್ಣನ ಮೈಬಣ್ಣವು ನೀಲಿ ಬಣ್ಣಕ್ಕೆ ತಿರುಗಿತು. ನಂತರ ಪೂತನಿ ರಾಕ್ಷಸಿಯ ಸಂಹಾರವನ್ನು ಮಾಡಿದನು. ರಾಧೆಯು ಕೃಷ್ಣನ ಮೈಬಣ್ಣ ಬದಲಾಗಿರುವುದಕ್ಕೆ ಚಿಂತಿಸದೆ ಅವನ ಪ್ರೀತಿಯನ್ನು ಗೌರವಿಸಿದಳು. ಅವರಿಬ್ಬರ ಪ್ರೀತಿಯ ಪ್ರತೀಕವಾಗಿ ಹೋಳಿ ಹಬ್ಬದ ಆಚರಣೆ ಮಾಡಲಾಯಿತು ಎಂದು ಹೇಳಲಾಗುವುದು.

*ದೀಪದ ಮುಂದೆ ಪ್ರಾರ್ಥನೆ*
ಹೋಳಿ ಹಬ್ಬದ ಹಿಂದಿನ ದಿನ ಜನರು ದೀಪೋತ್ಸವವನ್ನು ಆಚರಿಸುತ್ತಾರೆ. ಆ ದೀಪೋತ್ಸವದ ಸುತ್ತಲೂ ಎಲ್ಲರೂ ಒಟ್ಟುಗೂಡಿ, ಧಾರ್ಮಿಕ ವಿಧಿ-ವಿಧಾನಗಳ ಮೂಲಕ ದೇವರಲ್ಲಿ ತಪ್ಪು ಹಾಗೂ ದುಷ್ಟ ತನವನ್ನು ತೊಡೆದುಹಾಕುವಂತೆ ಕೇಳುವರು. ತಮ್ಮ ತಪ್ಪುಗಳಿಗೆ ಕ್ಷಮಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾರೆ. ನಂತರ ಹೋಲಿಕಾ ದಹನ ಕ್ರಮವನ್ನು ಆಚರಿಸುತ್ತಾರೆ. ನೇಪಾಳದಲ್ಲಿ ಈ ವಿಧಿ-ವಿಧಾನವು ಹೋಳಿ ಹಬ್ಬದಲ್ಲಿ ಸಾಮಾನ್ಯವಾದದ್ದು.

*ಸಮಾನತೆಯ ಹಬ್ಬ*
ಜಾತಿ, ಧರ್ಮ, ಮೇಲು, ಕೀಳು, ದೊಡ್ಡವರು, ಚಿಕ್ಕವರು ಎನ್ನುವ ತಾರತಮ್ಯವಿಲ್ಲದೆ ಎಲ್ಲರೂ ಬಣ್ಣವನ್ನು ಬಳಿಯುವುದು, ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವ ಆಚರಣೆಯನ್ನು ಕೈಗೊಳ್ಳುತ್ತಾರೆ. ಈ ಹಬ್ಬವು ಎಲ್ಲರ ನಡುವೆ ಇರುವ ಅಹಂ ಹಾಗೂ ಸೊಕ್ಕಿನ ಭಾವನೆಯನ್ನು ತೊರೆದು ಬೆರೆತು ಬಾಳುವ ಸಂದೇಶವನ್ನು ನೀಡುವುದು. ಎಲ್ಲರೊಂದಿಗೂ ಬೆರೆತಾಗ ಜೀವನದಲ್ಲಿ ಹೆಚ್ಚು ಸಂತೋಷ ಇರುತ್ತದೆ ಎನ್ನುವುದನ್ನು ಹೋಳಿ ಹಬ್ಬ ತೋರಿಸಿಕೊಡುವುದು.

*ಭಾಂಗ್ ಪಾನೀಯ*
ಉತ್ತರ ಭಾರತದಲ್ಲಿ ಹೋಳಿ ಹಬ್ಬದ ಸಮಯದಲ್ಲಿ ಭಾಂಗ್ ಪಾನೀಯವನ್ನು ಕುಡಿಯುವುದು ಸಾಮಾನ್ಯವಾದ ಸಂಗತಿಯಾಗಿದೆ. ಈ ಪಾನೀಯವನ್ನು ಕುಡಿಯುವುದರಿಂದ ವ್ಯಕ್ತಿ ಒಂದು ರೀತಿಯ ಗುಂಗಿಗೆ ಒಳಗಾಗುತ್ತಾನೆ. ಆಗ ವ್ಯಕ್ತಿಯಲ್ಲಿ ಎಲ್ಲಾ ರೀತಿಯ ನಿರ್ಬಂಧಗಳು ಮರೆಯಾಗುತ್ತವೆ. ದ್ವೇಷಗಳನ್ನು ಮರೆಸಿ, ಉತ್ಸಾಹವನ್ನು ಹೆಚ್ಚಿಸುವುದು. ಹಾಗಾಗಿ ಹಬ್ಬದ ಸಮಯದಲ್ಲಿ ಕುಟುಂಬದವರು ಹಾಗೂ ಸ್ನೇಹಿತರು ಭಾಂಗ್ ಎಲೆಯ ರಸವನ್ನು ಕುಡಿದು ಹಬ್ಬವನ್ನು ಆಚರಿಸುತ್ತಾರೆ.

*ಕಾಠ್ಮಂಡು ನಗರದಲ್ಲಿ ಹೋಳಿ*
ಕಾಠ್ಮಂಡು ನಗರದಲ್ಲಿ ಹೋಳಿ ಹಬ್ಬದ ಒಂದು ವಾರ ಮೊದಲು ವರ್ಣ ರಂಜಿತ ಬಟ್ಟೆಯನ್ನು ಧರಿಸಿ, ಬಿದಿರಿನ ಗಳ ಅಥವಾ ಬಿದಿರನ್ನು ಬಳಸಿ ಹನುಮಂತನ ದೇವಾಲಯವನ್ನು ನಿರ್ಮಿಸುತ್ತಾರೆ. ಹೋಳಿಯ ಹಿಂದಿನ ದಿನದಂದು ಅವುಗಳನ್ನು ತೆಗೆದು ಹೋಲಿಕಾಳ ದಹನವನ್ನು ಮಾಡುವುದರ ಮೂಲಕ ದುಷ್ಟ ಹೋಲಿಕಾಳನ್ನು ಸುಡುತ್ತಾರೆ. ನಂತರ ಹೋಳಿ ಹಬ್ಬವನ್ನು ಆಚರಿಸುವರು.

*16 ದಿನಗಳ ಕಾಲ ಹೋಳಿ ಆಚರಣೆ*
ಕಾಠ್ಮಂಡುವಿನಲ್ಲಿ ಹೋಳಿ ಹಬ್ಬಕ್ಕೆ ಒಂದು ವಾರ ಮೊದಲು ಬಣ್ಣದ ನೀರನ್ನು ತುಂಬಿದ ಪಿಚಕಾರಿ, ನೀರಿನ ಬಲೂನು, ವಿವಿಧ ಬಣ್ಣಗಳಿಂದ ಕೂಡಿದ ಬಿದಿರಿನ ಕಡ್ಡಿಗಳ ಅಲಂಕಾರವನ್ನು ಹನುಮಂತನ ದೇವಾಲಯಕ್ಕೆ ಮಾಡುತ್ತಾರೆ. ಇದು ಹಬ್ಬದ ಆರಂಭವನ್ನು ಸೂಚಿಸುವುದು. ಇಲ್ಲಿ ಒಂದು ವಾರ ಮುಂಚಿತವಾಗಿಯೇ ಬಣ್ಣದ ನೀರಿನ ಸಿಂಚನಗಳು ಸಾಮಾನ್ಯವಾಗಿ ಇರುತ್ತವೆ. ಹಿಂದೂ ಧರ್ಮದಲ್ಲಿ ಹೋಳಿಯ ಆಚರಣೆಯು 16 ದಿನಗಳ ಕಾಲ ವಿಶೇಷ ಆಚರಣೆಯನ್ನು ಸೂಚಿಸುತ್ತದೆ. ಕೆಲವು ಗ್ರಾಮೀಣ ಪ್ರದೇಶದಲ್ಲಿ ಹಬ್ಬಕ್ಕೂ ಮುಂಚೆ 16 ದಿನಗಳ ಕಾಲ ವಿಶೇಷ ಅಲಂಕಾರ, ವೇಷ-ಭೂಷಣದಲ್ಲಿ ಮನೆ ಮನೆಗೆ ಹೋಗಿ ನೃತ್ಯವನ್ನು ಮಾಡುತ್ತಾರೆ. ಹಬ್ಬದ ದಿನ ಆ ಬಣ್ಣಗಳನ್ನು ತೆಗೆದು ಕಾಮದೇವನನ್ನು ದಹಿಸುವುದರ ಮೂಲಕ ಹಬ್ಬವನ್ನು ಆಚರಿಸುವರು.

*ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ*
ಫಾಲ್ಗುಣ ಮಾಸದ (ಫೆಬ್ರವರಿ ಅಥವಾ ಮಾರ್ಚ್ ನಡುವೆ ಬರುವ ಸಮಯ) ಹುಣ್ಣಿಮೆಯಂದು ಹೋಳಿಯನ್ನು ಆಚರಿಸಲಾಗುವುದು. ಈ ಹಬ್ಬದ ಉತ್ಸವವು ವಸಂತ ಕಾಲದ ಆರಂಭವನ್ನು ಹಾಗೂ ದೀರ್ಘ ಕಾಲದ ಚಳಿಯ ಅಂತ್ಯವನ್ನು ಸೂಚಿಸುತ್ತದೆ.

*ವಿವಿಧೆಡೆಯಲ್ಲಿ ಆಚರಣೆ*
ಹೋಳಿ ಹಬ್ಬವನ್ನು ಸಾಮಾನ್ಯವಾಗಿ ನೇಪಾಳ ಮತ್ತು ಭಾರತೀಯರು ಮಾತ್ರ ಆಚರಿಸುತ್ತಿದ್ದರು. ಈ ಪ್ರದೇಶದಿಂದ ಹೋಗಿ ಇತರೆಡೆ ನೆಲೆಸಿರುವ ಜನಗಳು ಹಾಗೂ ಹಿಂದೂ ಸಂಸ್ಕೃತಿ ಹಾಗೂ ಆಚರಣೆಯನ್ನು ಅರಿತ ಜನರು ಸಹ ವಿವಿಧ ಪ್ರದೇಶದಲ್ಲಿ ಹೋಳಿ ಹಬ್ಬದ ಆಚರಣೆಯನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಿಂದಾಗಿ ಇಂದು ಬಾರ್ಸಿಲೋನ್, ಮಾರಿಷನ್, ಫಿಜಿ, ಗಯಾನಾ, ಟ್ರಿನಿಟಾಡ್ ಮತ್ತು ಟೊಬಾಗೊ, ಫಿಲಿಪೈನ್, ಯುಎಸ್‍ಎ ಮತ್ತು ಯುಕೆಗಳಂತಹ ಪ್ರಮುಖ ದೇಶಗಳಲ್ಲಿಯೂ ಆಚರಿಸುತ್ತಾರೆ.

For daily updates join our whatsapp group.

https://chat.whatsapp.com/HpXMVlugGqV1x4ja3itArf